ಚೌರಿಚೌರಾ
ಇದು ಉತ್ತರ ಪ್ರದೇಶದಲ್ಲಿ ಗೋರಖಪುರದ ಬಳಿ ಇರುವ ಒಂದು ಸಣ್ಣ ಹಳ್ಳಿ. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಈ ಹಳ್ಳಿಯ ಹೆಸರು ಶಾಶ್ವತವಾಗಿದೆ. 1922ರ ಫೆಬ್ರುವರಿ 4ರಂದು ಇಲ್ಲಿ ಒಂದು ಅತ್ಯಂತ ವಿಷಾದಕರ ಘಟನೆ ಸಂಭವಿಸಿತು. ಆ ಸಮಯದಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿಯನ್ನು ನಿರ್ದೇಶಿಸಲು ಗಾಂಧಿಯವರನ್ನು ಏಕೈಕ ನಾಯಕರಾಗಿ ಕಾಂಗ್ರೆಸ್ ಆರಿಸಿತ್ತು. ಬೃಹತ್‍ಪ್ರಮಾಣದಲ್ಲಿ ಜನತಾಚಳವಳಿ ನಡೆಸಲು ತಕ್ಕ ಉತ್ಸಾಹ ರಾಷ್ಟ್ರದಲ್ಲಿ ಮೂಡಿತ್ತು. ತಮ್ಮ ಅಹಿಂಸಾತ್ಮಕ ಸತ್ಯಾಗ್ರಹ ಚಳವಳಿಯನ್ನು ಮೊದಲು ಬಾರ್ದೋಲಿ ಜಿಲ್ಲೆಯಲ್ಲಿ ಆರಂಭಿಸಬೇಕೆಂದು ಗಾಂಧಿಯವರು ಆಲೋಚಿಸಿದ್ದರು. ಆ ಸಮಯದಲ್ಲಿ ಚೌರಿಚೌರಾದಲ್ಲಿ ದುರ್ಘಟನೆ ಸಂಭವಿಸಿದ್ದು. ಆ ಊರಿನ ಜನರು ಕಾಂಗ್ರೆಸ್ ಧ್ವಜದೊಂದಿಗೆ ಅಲ್ಲಿ ಒಂದು ಮೆರವಣಿಗೆ ಏರ್ಪಡಿಸಿದ್ದರು. ಅಲ್ಲಿಯ ಪೋಲಿಸ್ ಠಾಣೆಯ ಮುಂದೆಯೇ ಮೆರವಣಿಗೆ ಹಾದುಹೋಗಬೇಕಾಗಿತ್ತು. ಮೆರವಣಿಗೆ ಠಾಣೆಯಿಂದ ಮುಂದುವರಿದಾಗ ಅದರ ಹಿಂಭಾಗದಲ್ಲಿದ್ದ ಕೆಲವರನ್ನು ಪೋಲಿಸರು ಮೂದಲಿಸಿ, ರೇಗಿಸಿ ಹೊಡೆಯಲಾರಂಭಿಸಿದರು. ಕೂಗಾಟ ಆರಂಭವಾಯಿತು. ಮೆರವಣಿಗೆಯ ಜನ ಹಿಂದಿರುಗಿ ಪೋಲಿಸಿನ ಮೇಲೆ ಬಿದ್ದರು. ಪೋಲಿಸರು ಗುಂಡು ಹಾರಿಸಿದರು. ಅಷ್ಟರಲ್ಲಿ ಅವರಲ್ಲಿದ್ದ ಮದ್ದು ಮುಗಿದುಹೋಯಿತು. ಆದ್ದರಿಂದ ಅವರು ಠಾಣೆಯೊಳಗೆ ಅವಿತುಕೊಂಡರು. ಜನರು ಠಾಣೆಗೆ ಬೆಂಕಿ ಇಟ್ಟರು. ತಪ್ಪಿಸಿಕೊಳ್ಳಲು ಹೊರಬಂದ ಪೋಲಿಸರನ್ನು ತುಂಡರಿಸಿ ಬೆಂಕಿಗೆ ಹಾಕಿದರು. ಇಪ್ಪತ್ತೆರಡು ಮಂದಿ ಪೋಲಿಸರು ಆಹುತಿಯಾದರು.

	ಬಾರ್ದೋಲಿ ಜಿಲ್ಲೆಯಲ್ಲಿ ಕರನಿರಾಕರಣೆಯ ಸತ್ಯಾಗ್ರಹವನ್ನು ಆರಂಭಿಸಬೇಕೆಂದು ಈ ವಿಚಾರವಾಗಿ ವೈಸ್‍ರಾಯರಿಗೆ ಒಂದು ಪತ್ರವನ್ನು ಬರೆದಿದ್ದ ಮಹಾತ್ಮಗಾಂಧಿಯವರು ಚೌರಿಚೌರಾದ ದುರ್ಘಟನೆಯ ಸುದ್ದಿ ಕೇಳಿ ಪರಿತಪಿಸಿದರು. ಕೂಡಲೆ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯನ್ನು ಕರೆದರು. (ಫೆಬ್ರುವರಿ 11). ಸತ್ಯಾಗ್ರಹವನ್ನು ಆರಂಭಿಸುವ ತೀರ್ಮಾನವನ್ನು ಸದ್ಯಕ್ಕೆ ಕೈಬಿಡಬೇಕೆಂದು ನಿಶ್ಚಯಿಸಿದರು. ತಮ್ಮ ಯಂಗ್ ಇಂಡಿಯ ಪತ್ರಿಕೆಯಲ್ಲಿ (ಫೆಬ್ರುವರಿ 16) ಇದನ್ನು ಕುರಿತು ಗಾಂಧಿಯವರು ಒಂದು ದೀರ್ಘ ಲೇಖನ ಬರೆದು ತಾವು ಸತ್ಯಾಗ್ರಹ ನಿಲ್ಲಿಸಿದ್ದನ್ನು ಸಮರ್ಥಿಸಿದರು. ಅಹಿಂಸಾತ್ಮಕ ಸಮರಕ್ಕೆ ಜನತೆಯಿನ್ನೂ ಸಿದ್ಧವಾಗಿಲ್ಲವೆಂಬುದು ಅವರ ಮನವರಿಕೆಯಾಗಿತ್ತು. ತಮ್ಮ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ 5 ದಿನಗಳ ಉಪವಾಸ ಕೈಗೊಂಡರು. ಫೆಬ್ರುವರಿ 25ರಂದು ಸೇರಿದ್ದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಾರ್ಯ ಸಮಿತಿಯ ನಿರ್ಣಯವನ್ನು ಸ್ಥಿರೀಕರಿಸಿತು.

	ಸಾಮೂಹಿಕ ಅಸಹಕಾರ ಚಳವಳಿಯನ್ನು ನಿಲ್ಲಿಸಬೇಕೆಂಬ ತೀರ್ಮಾನದಿಂದ ದೇಶದಲ್ಲಿ ತುಂಬ ನಿರಾಶೆ ಹಬ್ಬಿತು. ಗಾಂಧಿಯವರ ತೀರ್ಮಾನವನ್ನು ಅನೇಕ ಕಾಂಗ್ರೆಸ್ಸಿಗರೇ ಟೀಕಿಸಿದರು. ಹಿಂಸಾಕೃತ್ಯಗಳನ್ನು ಪ್ರಚೋದಿಸಲು ಗಾಂಧಿಯವರೇ ಕಾರಣರೆಂದು ವೈಸ್‍ರಾಯ್ ಲಾರ್ಡ್ ರೀಡಿಂಗ್ ವಾದಿಸಿದ. ಗಾಂಧಿಯವರ ದಸ್ತಗಿರಿಯಾಯಿತು. ಅವರಿಗೆ ಆರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಯಿತು. ಚೌರಿಚೌರಾ ಘಟನೆಯಿಂದಾಗಿ ಅಸಹಕಾರ ಚಳವಳಿಗೆ ಭಾರಿ ಪೆಟ್ಟು ಬಿದ್ದಂತೆ ತೋರಿತು.
(ಕೆ.ಎಸ್.ಜಿ.ಆರ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ